ಕೇಶವಮೂರ್ತಿ, ಆರ್ ಆರ್

(1914- ). ಏಳು ತಂತಿ ಪಿಟೀಲು ವಾದನದಲ್ಲಿ ಅದ್ಭುತ ಸಾಧನೆ ಮಾಡಿರುವ ಆರ್ ಆರ್ ಕೇಶವಮೂರ್ತಿ ರುದ್ರಪಟ್ಟಣದವರು. ಅರಕಲಗೂಡು ತಾಲ್ಲೂಕಿನಲ್ಲಿ ಕಾವೇರಿ ತೀರದಲ್ಲಿರುವ ರುದ್ರಪಟ್ಟಣ ಗ್ರಾಮ. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಖ್ಯಾತನಾಮರಾದ ಸುಮಾರು ನಲವತ್ತುಮಂದಿ ಸಂಗೀತಗಾರರು ವಾಗ್ಗೇಯಕಾರರಿಗೆ ಜನ್ಮ ನೀಡಿದ ಪುಣ್ಯ ತಾಣ. 
ಕೇಶವಮೂರ್ತಿ ಅವರ ತಂದೆ ರುದ್ರಪಟ್ಟಣದ ರಾಮಸ್ವಾಮಯ್ಯ, ತಾಯಿ ಸುಬ್ಬಮ್ಮ, ಹುಟ್ಟಿದ್ದು 1914ರ ಮೇ 27ರಂದು. ರಾಮಸ್ವಾಮಯ್ಯ ಸಂಗೀತಗಾರರು. ತಾತ ವೆಂಕಟರಾಮಯ್ಯ ಪ್ರಖ್ಯಾತ ಸಂಗೀತಗಾರರು, ವಾಗ್ಗೇಯಕಾರರು. ಆರ್.ಆರ್. ಕೇಶವಮೂರ್ತಿಗಳಿಗೆ ಮೊದಲ ಸಂಗೀತ ಗುರು ಅವರ ತಂದೆ. ಏಳು ವರ್ಷ ವಯಸ್ಸಿನಲ್ಲಿ ಮೈಸೂರಿಗೆ ಪ್ರಯಾಣ. ಹಿರಿಯ ಸಂಗೀತಗಾರರಾದ ಬಿಡಾರಂ ಕೃಷ್ಣಪ್ಪನವರಲ್ಲಿ ಪಿಟೀಲು ವಾದನದ ಅಭ್ಯಾಸ. ಚಿಕ್ಕರಾಮರಾಯರಲ್ಲಿ ಸಂಗೀತ ಪಾಠ. ಅಗ್ರಮಾನ್ಯ ಪಿಟಿಲುವಾದಕರಾದ ಟಿ.ಚೌಡಯ್ಯ, ಡಾ.ಬಿ.ದೇವೇಂದ್ರಪ್ಪ, ಟಿ.ಪುಟ್ಟಸ್ವಾಮಯ್ಯ ಮೊದಲಾದವರು ಆವೇಳೆಗಾಗಲೇ ಬಿಡಾರಂ ಅವರ ಶಿಷ್ಯರಾಗಿ ಸಂಗೀತಾಭ್ಯಾಸ ಮಾಡುತ್ತಿದ್ದರು. 

ಬಿಡಾರಂ ರವರ ಪಾಠಕ್ರಮ ಅಚ್ಚುಕಟ್ಟು, ಶಿಸ್ತಿನಿಂದ ಕೂಡಿದ್ದು . ಕನಿಷ್ಠ ದಿನಕ್ಕೆ ಎಂಟು ತಾಸು ಸಾಧನೆ ಮಾಡಲೇಬೇಕಾಗಿತ್ತು, ವಾರಕ್ಕೆ ಒಂದೇರಾಗ. ಎಂಟು ಗಂಟೆ ಒಳಗೆ, ವ್ಯಾಯಾಮ ಸ್ನಾನ ಫಲಹಾರ ಮುಗಿಸಿ, ಪಾಠಕ್ಕೆ ಸಿದ್ಧವಾಗಬೇಕಾಗಿತ್ತು. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಮೂರು ಹೊತ್ತು ಸಾಧನೆ. ಶ್ರುತಿ, ಲಯಗಳಲ್ಲಿ ದೋಷವಾದರೆ ಗುರುಗಳು ಸಹಿಸುತ್ತಿರಲಿಲ್ಲ. ಗುರುಗಳ ಕಣ್ಣೆಚ್ಚರದಲ್ಲಿ ನಡೆಯುತ್ತಿದ್ದ ಕಟ್ಟು ನಿಟ್ಟಾದ ಅಭ್ಯಾಸದ ಜೊತೆಗೆ, ವೈಯಕ್ತಿಕ ಆಸಕ್ತಿ, ಶ್ರದ್ಧೆಯಿಂದ ಕೇಶವಮೂರ್ತಿ ಅವರ ಪಿಟೀಲು ವಾದನ ಕೌಶಲ್ಯ ಪರಿಪಕ್ವಗೊಳ್ಳತೊಡಗಿತು. ದಶಕಗಳ ಸಾಧನೆಯಿಂದ ಗಾಯನ ಕಛೇರಿಗಳಲ್ಲಿ ವಾದ್ಯ ಸಹಕಾರ ನೀಡುವಷ್ಟು ಸಮರ್ಥರಾಗಿದ್ದರು. ಸಂಗೀತ ವಲಯದಲ್ಲಿ ಪ್ರಸಿದ್ಧಿ ಪಡೆಯತೊಡಗಿದರು. ಆರ್.ಆರ್.ಕೆ ಎಂದೇ ಸಂಗೀತ ವಲಯದಲ್ಲಿ ಪರಿಚಿತರಾದ ಕೇಶವಮೂರ್ತಿಗಳು 1934ರಲ್ಲಿ ಮೈಸೂರನ್ನು ಬಿಟ್ಟು, ಬೆಂಗಳೂರಿಗೆ ಬಂದು ಸಂಗೀತ ಶಾಲೆ ಆರಂಭಿಸಿ ಅದಕ್ಕೆ ತಮ್ಮ ಗುರುಗಳ ಹೆಸರನ್ನೇ ಇಟ್ಟರು. ಗಾನವಿಶಾರದ ಬಿಡಾರಂ ಕೃಷ್ಣಪ್ಪ ಸ್ಮಾರಕ ಸಂಗೀತ ವಿದ್ಯಾಲಯ ಸಂಗೀತ ಹಾಗೂ ಪಿಟೀಲು ಶಿಕ್ಷಣಕ್ಕೆ ಮೀಸಲಾಗಿತ್ತು. ಇಲ್ಲಿ ತಮ್ಮ ಗುರುಕುಲದಲ್ಲಿ ನಡೆಯುತ್ತಿದ್ದಂತೆಯೇ ಅಚ್ಚುಕಟ್ಟಾದ, ನಿಷ್ಠುರ ಶಿಸ್ತಿನ ಪಾಠಕ್ರಮ ಜಾರಿಗೆ ಬಂದಿತು. 

ತಮ್ಮ ಸಹಪಾಠಿಯಾಗಿದ್ದ ಚೌಡಯ್ಯನವರು ರೂಪಿಸಿದ ಏಳು ತಂತಿ ಪಿಟೀಲು, ಆರ್. ಆರ್.ಕೆಯವರನ್ನು ಆಕರ್ಷಿಸಿತು. ಅದರಲ್ಲಿ ಮಾಡಿದ ಸಾಧನೆ ಅದ್ಭುತವಾದದ್ದು. ಆರಂಭದಲ್ಲಿ ಆರ್.ಆರ್.ಕೆ ನಾಲ್ಕು ತಂತಿಗಳ ಪಿಟೀಲನ್ನೇ ನುಡಿಸುತ್ತಿದ್ದರು. ಚೌಡಯ್ಯನವರು ಏಳು ತಂತಿ ಪಿಟೀಲು ನುಡಿಸುತ್ತಿದ್ದನ್ನು ಗಮನಿಸಿ, ಅದರಲ್ಲಿ ಆಸಕ್ತಿ ಬೆಳೆಯಿತು. ಏಳು ತಂತಿ ಪಿಟೀಲನ್ನು ನುಡಿಸುವುದರಲ್ಲಿ ಪರಿಣಿತರಾದರು. ನಾಲ್ಕು ತಂತಿ ಪಿಟೀಲು ಸ್ತ್ರೀಯಂತೆ ಕೋಮಲ, ಮೃದು. ಏಳು ತಂತಿ ಪಿಟೀಲು ಗಂಡಿನಂತೆ. ಅದನ್ನು ನುಡಿಸಲು ದೈಹಿಕ ಸಾಮಥ್ರ್ಯ ಬೇಕು. ವೈಜ್ಞಾನಿಕ ಜ್ಞಾನ ಬೇಕು. ಒಳ್ಳೆಯ ಗಾತ್ರವಾದ ಶಾರೀರ ಇರುವವರು ಮಾತ್ರ ಏಳು ತಂತಿ ಪಿಟೀಲನ್ನು ಪಕ್ಕ ವಾದ್ಯವಾಗಿ ಬಳಸಿಕೊಂಡರೆ ಶೋಭೆ, ಇಲ್ಲವಾದರೆ, ಗಾಯಕನ ಧ್ವನಿಯೇ ಮುಚ್ಚಿ ಹೋಗುತ್ತದೆ, ಎನ್ನುತ್ತಾರೆ ಆರ್.ಆರ್.ಕೆ.

ಆರ್.ಆರ್.ಕೆಯವರು ಕಛೇರಿಗಳಲ್ಲಿ ಗಾಯಕನನ್ನು ಅನುಸರಿಸುವುದಿಲ್ಲ. ಗಾಯಕ ಆಲಾಪನೆ ಮಾಡಿದ ಮೇಲೆ ಅದನ್ನೇ ನುಡಿಸುವುದಿಲ್ಲ. ಮುಂದಿನ ಸಂಗತಿ ನುಡಿಸಿ, ಗಾಯಕನಿಗೆ ಮಾರ್ಗದರ್ಶಿ ಆಗುತ್ತಾರೆ. ಇದರಿಂದ ಗಾಯಕರಿಗೆ ಇರಿಸು ಮುರಿಸು. ಆರ್. ಆರ್.ಕೆ ಅವರ ಈ ವಾದನ ಶೈಲಿಯಿಂದಾಗಿ ಪಿಟೀಲಿನ ಪಕ್ಕವಾದ್ಯಕಾರರಾಗಿ ಅವರು ಜನಪ್ರಿಯರಾಗಿಲ್ಲ. 

ಆರ್.ಆರ್.ಕೆ. ಬೆಂಗಳೂರಿಗೆ ಬಂದ ಮೇಲೆ ಅವರು ಕನ್ನಡ ಸಂಸ್ಕøತ ತಮಿಳು ಹಿಂದಿ ಭಾಷೆಗಳನ್ನು ಅಧ್ಯಯನ ಮಾಡಿದರು. ಲಕ್ಷ್ಯ ಮತ್ತು ಶಾಸ್ತ್ರದಲ್ಲಿ ಪರಿಣಿತರಾದ ಆರ್.ಆರ್.ಕೆ. ಲಕ್ಷ್ಯ ಮತ್ತು ಲಕ್ಷಣಕ್ಕೆ ಸಂಬಂಧ ಪಟ್ಟಂತೆ 14 ಅಮೂಲ್ಯ ಗ್ರಂಥಗಳನ್ನು ರಚಿಸಿದ್ದಾರೆ. ಸಂಗೀತ ಕ್ಷೇತ್ರಕ್ಕೆ ಆರ್.ಆರ್.ಕೆ. ನೀಡಿರುವ ಪಠ್ಯ ಹಾಗೂ ಶಾಸ್ತ್ರ ಗ್ರಂಥಗಳು : ಬಾಲ ಶಿಕ್ಷಣ (ಎರಡು ಭಾಗಗಳಲ್ಲಿ), ವಾಗ್ಗೇಯಕಾರರ ಕೃತಿಗಳು (ಮೂರು ಭಾಗಗಳಲ್ಲಿ), ಲಕ್ಷ್ಯ, ಲಕ್ಷಣ ಪದ್ಧತಿ, ಸಂಗೀತ ಲಕ್ಷ್ಯ ವಿಜ್ಞಾನ, ವಾಗ್ಗೇಯಕಾರರು. ಹಿಂದೂಸ್ಥಾನಿ ರಾಗ ಕೋಶ, ಬೃಹತ್ತರ ಮೇಳರಾಗಮಾಲಿಕಾ, ಮುವ್ವಗೋಪಾಲಾಂಕಿತ ಕ್ಷೇತ್ರಯ್ಯ ಪದಗಳು (ಎರಡು ಭಾಗಗಳಲ್ಲಿ) ಸಂಗೀತ ಶಾಸ್ತ್ರ ಸಾಗರ, ಕಛೇರಿ ಪದ್ಧತಿ, ತಂತಿ ವಾದ್ಯಗಳ ಲಕ್ಷ್ಯ, ಲಕ್ಷಣ, ಲಕ್ಷಣ ಗೀತ ಭಂಡಾರ, ಗೀತ ಗೋವಿಂದ ಅಷ್ಟಪದಿ, ರಾಗಗಳ ರಸ ಮೀಮಾಂಸೆ, ಕೃತಿಗಳ ಮೀಮಾಂಸೆ.

ಸಂಗೀತ ಕ್ಷೇತ್ರದ ದಿಗ್ಗಜರಾದ ಪಲ್ಲಡಂ ಸಂಜೀವರಾವ್, ಮುಸಿರಿ ಸುಬ್ರಹ್ಮಣ್ಯ ಐಯ್ಯರ್, ಅರಿಯಾಕ್ಕುಡಿ ರಾಮಾನುಜ ಐಯ್ಯಂಗಾರ್, ಚೆಂಬೈ ವೈದ್ಯನಾಥ್ ಭಾಗವತರ್, ಟೈಗರ್ ವರದಾಚಾರ್, ಮೈಸೂರು ವಾಸುದೇವಾಚಾರ್, ಜಿ.ಎನ್.ಬಾಲಸುಬ್ರಹ್ಮಣ್ಯಂ, ಗುರುಗಳಾದ ಬಿಡಾರಂ ಕೃಷ್ಣಪ್ಪ ಮೊದಲಾದ ಹಿರಿಯ ಚೇತನಗಳಿಗೆ ಪಿಟೀಲು ಪಕ್ಕವಾದ್ಯ ನೀಡಿದ್ದಾರೆ. ಭಾರತಾದ್ಯಾಂತ ಪ್ರತಿಷ್ಠಿತ ಸಮ್ಮೇಳನಗಳಲ್ಲಿ, ಆಕಾಶವಾಣಿ, ದೂರದರ್ಶನದಲ್ಲಿ ತನಿ ಕಛೇರಿ ನಡೆಸಿದ್ದಾರೆ.
ಆರ್.ಆರ್.ಕೆ. ಅವರ ಶಿಷ್ಯರಲ್ಲಿ ಅನೇಕರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಗಳಿಸಿದ್ದಾರೆ. ಟಿ.ರುಕ್ಮಿಣಿ, ದಿ ಆನೂರು ಎಸ್ ರಾಮಕೃಷ್ಣ, ಗಿಟಾರ್ ವಾದನದಲ್ಲಿ ಕರ್ನಾಟಕ ಸಂಗೀತ ನುಡಿಸುವ ನಿಖಿಲ್ ಘೋಷ್, ಜ್ಯೋತ್ಸ್ನಾ ಶ್ರೀಕಾಂತ್ ಇವರು ಮುಖ್ಯರು.

ಏಳು ತಂತಿ ಪಿಟೀಲಿನ ವಾದ್ಯದಲ್ಲಿ ಅದ್ಭುತ ಸಾಧನೆ ಮಾಡಿರುವ ಆರ್.ಆರ್.ಕೆ.ಅವರಿಗೆ ಸಂದಿರುವ ಪ್ರಶಸ್ತಿಗಳು, ಪುರಸ್ಕಾರಗಳು ಅಸಂಖ್ಯ. ತಿರುಮಲ ತಿರುಪತಿ ವಾರ್ತಾ ಕೇಂದ್ರದ ಸಂಗೀತ ಶಾಸ್ತ್ರ ಪ್ರವೀಣ ಬಿರುದು (1975) ಬೆಂಗಳೂರು ಗಾಯನ ಸಮಾಜದ 10ನೇ ವಾರ್ಷಿಕ ಸಮ್ಮೇಳನದಲ್ಲಿ ಸಂಗೀತ ಕಲಾ ರತ್ನ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ (1980), ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ (1995) ಮತ್ತು ಕರ್ನಾಟಕದ ಪ್ರತಿಷ್ಠಿತ ಕನಕ ಪುರಂದರ ಪ್ರಶಸ್ತಿ (1993) ಮತ್ತು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2000) ಇವುಗಳು ಮುಖ್ಯವಾದವು.  							(ಎಂ.ಬಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ